ಪಗಾನ್ -
	ಬರ್ಮದ ಮೈಯಿಂಜಾನ್ ಜಿಲ್ಲೆಯಲ್ಲಿರುವ ಒಂದು ಸ್ಥಳ. ಪಾಳುಬಿದ್ದ ಪಟ್ಟಣ. ಇರವಾಡೀ ನದಿಯ ಎಡದಂಡೆಯ ಮೇಲೆ, ಮಾಂಡಲೇ ನಗರದ ನೈಋತ್ಯಕ್ಕೆ 147 ಕಿ.ಮೀ. ದೂರದಲ್ಲಿ ಇದೆ. ಈ ಹೆಸರನ್ನು ಜನಾಂಗದ ಅರ್ಥದಲ್ಲಿ, ಇಲ್ಲವೇ ರಾಜಮನೆತನದ ಅರ್ಥದಲ್ಲಿ ಕೂಡ ಬಳಸುವುದುಂಟು. ಕ್ರಿಸ್ತಶಕದ ಆರಂಭದ ಕಾಲದಿಂದಲೇ ಪಗಾನ್ ಭಾರತದೊಡನೆ ಸಂಪರ್ಕ ಪಡೆದಿತ್ತು ಎಂಬುಕ್ಕೆ ಸಾಹಿತ್ಯ ಮತ್ತು ಪುರಾತತ್ವಗಳ ಆಧಾರಗಳಿವೆ. ಆದ್ದರಿಂದ ಈ ಪ್ರದೇಶದ ಇತಿಹಾಸದಲ್ಲಿ ಭಾರತೀಯ ಸಂಸ್ಕøತಿಯ ಪ್ರಭಾವ ವಿಶೇಷವಾಗಿ ಕಂಡುಬರುತ್ತದೆ. ಮ್ರಮ್ಮ ಎಂಬ ಕುಲಕ್ಕೆ ಸೇರಿದ ಜನರು ಶ್ರೀಕ್ಷೇತ್ರ ಎಂಬ ಪ್ರದೇಶದಿಂದ ಓಡಿಸಲ್ಪಟ್ಟ ಮೇಲೆ ಪಗಾನನ್ನು ಅಭಿವೃದ್ಧಿಗೊಳಿಸಿ ಅಲ್ಲಿದಂದಲೇ ಆಳಲು ಪ್ರಾರಂಭಿಸಿದರು. ಮ್ರಮ್ಮನರ ಸಂಸ್ಕøತಿಗೆ ಪಗಾನ್ ತವರಾಯಿತು. ಬರ್ಮದಲ್ಲಿ ಬಳಕೆಯಲ್ಲಿರುವ ರಾಷ್ಟ್ರೀಯ ಶಕೆ ಕ್ರಿ.ಶ. 638ರಲ್ಲಿ ಪಗಾನ್‍ನ್ನಲ್ಲಿ ಆಳಿದ ರಾಜನಿಂದ ಪ್ರಾರಂಭವಾಯಿತೆಂದು ಅನೇಕರು ಅಭಿಪ್ರಾಯ ಪಡುತ್ತಾರೆ.

	ಪಗಾನನ್ನು 849ರಲ್ಲಿ ಪ್ಯಾನಪ್ಯ ಎಂಬವನು ಸ್ಥಾಪಿಸಿದನೆಂದು ಕೆಲವು ಕಥೆಗಳು ತಿಳಿಸುತ್ತವೆ. ಇದರ ಇನ್ನೊಂದು ಹೆಸರು ಅರಿಮರ್ದನಪುರ, ಇದು ಇದ್ದ ರಾಜ್ಯಕ್ಕೆ ತಾಮ್ರದ್ವೀಪ ಎಂದೂ ಹೆಸರಿತ್ತು. ಅರಿಮರ್ದನಪುರ ಸಾಮ್ರಾಜ್ಯದಲ್ಲಿ ಅತ್ಯಂತ ಶಕ್ತಿಯುತವಾದ ದೊರೆ ಅನಿರುದ್ಧ. ಇವನಿಂದ ಪಗಾನ್ ಒಂದು ಬಲಿಷ್ಠ ಸಾಮ್ರಾಜ್ಯವಾಗಿ ವಿಜೃಂಭಿಸಿತು. ಇವನು 1044 ರಿಂದ 1072ರ ವರೆಗೆ ರಾಜ್ಯವಾಳಿದ ಇವನ ಕಾಲದಲ್ಲಿ ಅರಿ ಎಂಬ ಬೌದ್ಧರ ತಂಡ ಕೀಳುಮಟ್ಟದ ತಾಂತ್ರಿಕ ಬೌದ್ಧ ಮತವನ್ನು ಪ್ರಚಾರ ಮಾಡುತ್ತಿತ್ತು. ಅನಿರುದ್ಧ ಪಗಾನ್ ರಾಜ್ಯದಲ್ಲಿ ವಾಸವಾಗಿದ್ದ ಅರ್ಹನ್ ಎಂಬ ಬೌದ್ಧ ಭಿಕ್ಷುವಿನ ಸಹಾಯದಿಂದ ಬೌದ್ಧ ಅರಿಗಳ ಸಂಪ್ರದಾಯವನ್ನು ನಾಶಮಾಡಿದ. ಧಟೋನಿನ ರಾಜನಿಂದ ತ್ರಿಪಿಟಕಗಳ ಪ್ರತಿಗಳನ್ನು ತಂದ. ತೇರವಾದ ಬೌದ್ಧಮತ ಪಗಾನಿನಲ್ಲಿ ಬೇರೂರಿತು. ಅನಿರುದ್ಧ ಸಿಂಹಳದ (ಶ್ರೀಲಂಕಾ) ರಾಜಾ ವಿಜಯ ಬಾಕುವಿನಿಂದ ಬೌದ್ಧ ಅವಶೇಷಗಳನ್ನು ತರಿಸಿಕೊಂಡು ಷ್ವೆ ಜಗಾನ್ ಪಗೋಡದಲ್ಲಿ ಸ್ಥಾಪಿಸಿದ. ಅನಿರುದ್ಧನ ಅನಂತರ ಇವನ ಮಗನಾದ ಕ್ಯಾನ್‍ಜಿತ್ಥನ ಆಳಿದ. ಇವನು ತ್ರಿಭುವನಾದಿತ್ಯ ಧರ್ಮರಾಜ ಎಂಬ ಹೆಸರಿನಿಂದ ರಾಜ್ಯವಾಳಿದ. ಇವನ ಕಾಲದಲ್ಲಿ ಭಾರತಕ್ಕೂ ಬರ್ಮಕ್ಕೂ ಸಾಂಸ್ಕøತಿಕ ಸಂಬಂಧಗಳು ವಿಶೇಷವಾಗಿ ಬೆಳೆದುವು. ಕ್ಯಾನ್‍ಜಿತ್ಥನ ಅತ್ಯಂತ ಮುಖ್ಯ ಕೊಡುಗೆಯೆಂದರೆ ಆನಂದ ದೇವಾಲಯ ಇವನು ಇನ್ನೂ ಹತ್ತಾರು ಹೊಸ ದೇವಾಲಯಗಳನ್ನು ಕಟ್ಟಿಸಿದ. ಇದರಿಂದ ಪಗಾನ್ ರಾಜ್ಯ ಬರ್ಮದಲ್ಲಿ ಪ್ರಮುಖ ಸ್ಥಾನಗಳಿಸಿತು. ಆದರೆ ಇವನ ಅನಂತರ ಬಂದ ರಾಜರು ಅಷ್ಟೊಂದು ಶೂರರಾಗಿರಲಿಲ್ಲವಾದ ಕಾರಣ, ಸುಮಾರು 13ನೆಯ ಶತಮಾನದ ಹೊತ್ತಿಗೆ ಪಗಾನಿನ ಪತನವಾಯಿತು.

	ಸಾಂಸ್ಕøತಿಕ ಇತಿಹಾಸದಲ್ಲಿ ಪಗಾನ ವಿಶೇಷವಾದ ಖ್ಯಾತಿಗಳಿಸಿದೆ. ಭಾರತೀಯ ವಾಸ್ತುಶಿಲ್ಪದ ಪ್ರಭಾವಗಳು ವಿಶೇಷವಾಗಿ ಬರ್ಮದಲ್ಲಿ ನಿಲ್ಲಲು ಪಗಾನ್ ರಾಜ್ಯವೇ ಕಾರಣ. ಅನಿರುದ್ಧ, ಕ್ಯಾನ್‍ಜಿತ್ಥ ಮುಂತಾದ ರಾಜರ ಕೊಡುಗೆಯಿಂದಾಗಿ ನೂರಾರು ಸ್ತೂಪಗಳೂ ದೇವಾಲಯಗಳೂ ಇಲ್ಲಿ ನಿರ್ಮಾಣವಾದವು. ಈ ಕಾಲದ ಕಟ್ಟಡಗಳೆಲ್ಲವೂ ಪಗಾನ್ ನಗರದಲ್ಲಿ ಕೇಂದ್ರೀಕೃತವಾಗಿದ್ದುವು. ಇಲ್ಲಿಯ ರಾಜರು ಅನೇಕರನ್ನು ಭಾರತಕ್ಕೆ ಕಳುಹಿಸಿ, ಅವರು ಅಲ್ಲಿ ನೋಡಿ ಬಂದ ಸ್ತೂಪ ಮತ್ತು ದೇವಾಲಯಗಳ ಆಧಾರದ ಮೇಲೆ ಪಗಾನ್‍ನ್ನಲ್ಲಿ ವಾಸ್ತುಶಿಲ್ಪಕೃತಿಗಳನ್ನು ಕಟ್ಟಿಸಿದರೆಂದು ಹೇಳಲಾಗಿದೆ. ವಾಸ್ತುಶೈಲಿಯ ದೃಷ್ಟಿಯಿಂದ ನೋಡಿದರೆ ಇದು ನಿಜವೆನ್ನಿಸುತ್ತದೆ. ಪಗಾನಿನ ಕೃತಿಗಳನ್ನು ಬಿಹಾರದ ಮತ್ತು ಬಂಗಾಲದ ವಾಸ್ತುಶಿಲ್ಪಿಗಳು ನಿರ್ಮಿಸಿದರೆಂಬುದು ಅನೇಕರ ವಾದ. ಭಾರತದ ಬೋಧ್‍ಗಯಾ ದೇವಾಲಯದ ಮಾದರಿಯಲ್ಲಿ ಬರ್ಮದ ಮಹಾಬೋಧಿ ದೇವಾಲಯ ನಿರ್ಮಾಣವಾಯಿತು. ಪಗಾನಿನ ಇತಿಹಾಸದಲ್ಲಿ ಮಾತ್ರವಲ್ಲದೆ ಬರ್ಮದ ಇತಿಹಾಸದಲ್ಲೇ ಆನಂದ ದೇವಾಲಯ ವಿಶೇಷ ಪ್ರಾಮುಖ್ಯಗಳಿಸಿದೆ. ಒರಿಸ್ಸದ ಉದಯಗಿರಿಯ ದೇವಾಲಯದ ಮಾದರಿಯಲ್ಲಿ ಅದನ್ನು ರಚಿಸಲಾಯಿತೆನ್ನಲಾಗಿದೆ. ಗಾತ್ರದ ದೃಷ್ಟಿಯಿಂದಲೂ ಅದೊಂದು ಮಹತ್ವ್ತದ ನಿರ್ಮಾಣ. ಸುಮಾರು 174 ಮೀ. ಚೌಕದ ವಿಶಾಲಾಂಗಣದಲ್ಲಿ ಚೌಕವಾಗಿರುವ ಕಟ್ಟಡವಿದು. ಇದರ ಪ್ರತಿಯೊಂದು ಬಾಹಂವೂ 49ಮೀ. ಇದೆ. ಈ ಚೌಕಾಕಾರವ ಕಟ್ಟಡಕ್ಕೆ ಮೇಲೆ ಹೋಗುತ್ತ ಕಿರಿದಾಗುವ ಗೋಪುರವಿದೆ. ಕೆಲವು ಹಂತಗಳ ಅನಂತರ ಇದು ನಾಗರ ಶಿಖರದಂತೆ ಮುಂದುವರಿಯುತ್ತದೆ. ಇದರ ಎತ್ತರ 55 ಮೀ. ಮುಖ್ಯ ಗರ್ಭಗೃಹದಲ್ಲಿ 10 ಮೀ. ಎತ್ತರದ, ನಾಲ್ಕು ದಿಕ್ಕುಗಳನ್ನೂ ನೋಡುವ ಬುದ್ಧನ ವಿಗ್ರಹವಿದೆ. ಸುತ್ತಲೂ ಸಾವಿರಾರು ಶಿಲ್ಪಫಲಕಗಳಿವೆ. ಅವುಗಳಲ್ಲಿ ಬುದ್ಧನ ಜೀವನಕ್ಕೆ ಸಂಬಂಧಿಸಿದ ಕಥೆಗಳು ಶಿಲ್ಪಿತವಾಗಿವೆ. ಬರ್ಮದ ಭಾರತೀಯ ದೇವಾಲಯವಿದೆಂದು ಅನೇಕರು ಇದನ್ನು ವರ್ಣಿಸಿದ್ದಾರೆ. ಷ್ವೇಜಗಾನ್ ಪಗೋಡ ವಾಸ್ತುಶಿಲ್ಪ ಶೈಲಿಯ ದೃಷ್ಟಿಯಿಂದ ಇಷ್ಟೊಂದು ಪ್ರಮುಖವಲ್ಲದಿದ್ದರೂ ಅದೊಂದು ಪವಿತ್ರ ಸ್ಥಳವಾಗಿ ಪರಿಗಣಿತವಾಗಿದೆ. ಪಗಾನ್ ಶಿಲ್ಪದಲ್ಲಿ ಬುದ್ಧನ ಶಿಲ್ಪ ಹೆಚ್ಚಿನ ವಿಕಾಸ ಹೊಂದಿದಂತೆ ಕಾಣುವುದಿಲ್ಲ. ಆದರೂ ಇದರಲ್ಲಿ ನಾಲಂದದ ಶಿಲ್ಪ ಪ್ರಭಾವ ಎದ್ದು ಕಾಣುತ್ತದೆ. ಪಗಾನ ಕಲೆಯಲ್ಲಿ ಕಾಣಬರುವ ಅರೆ ಉಬ್ಬು ಶಿಲ್ಪಗಳಲ್ಲಿ ಪಾಲರ ಶೈಲಿಯ ಪ್ರಭಾವ ಚೆನ್ನಾಗಿ ತೋರಿಬರುತ್ತದೆ. ಒಟ್ಟಿನಲ್ಲಿ ಪಗಾನಿನ ಇತಿಹಾಸದಲ್ಲಿ ಭಾರತೀಯ ಪ್ರಭಾವಗಳೇ ವಿಶೇಷವಾಗಿ ಕಂಡುಬರುತ್ತವೆ.							(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ